Back to List

Upcomming Events Details

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆರೋಗ್ಯ ಸುರಕ್ಷಾ ಕಾರ್ಡ್‌ ವಿತರಣೆ ಕಾರ್ಯಕ್ರಮ.


ಅಪರೂಪದ ರಕ್ತದ ಗುಂಪಿರುವ 50ಮಂದಿ ಯುವಕರನ್ನು ಒಳಗೊಂಡಂತೆ ತುರ್ತು ರಕ್ತದಾನದ ತಂಡ ರಚನೆ ಮಾಡಲಾಗಿದೆ. ತುರ್ತು ರಕ್ತ ಬೇಕಾದವರು ಈ ತಂಡವನ್ನು ಸಂಪರ್ಕಿಸಬಹುದು ಎಂದು ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಹೇಳಿದ್ದಾರೆ. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದಲ್ಲಿ ದಿನಾಂಕ 24/09/2016ರಂದು ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆರೋಗ್ಯ ಸುರಕ್ಷಾ ಕಾರ್ಡ್‌ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಣಿಪಾಲದ ಸುತ್ತಮುತ್ತಲಿನ ಯುವಕರು ಈ ತಂಡದಲ್ಲಿದ್ದಾರೆ. ಅಪರೂಪದ ಗ್ರೂಪಿನ ರಕ್ತ ಪಡೆಯುವರು ಬದಲಿಯಾಗಿ ರಕ್ತ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಮಣಿಪಾಲದ ಸಹಯೋಗದಲ್ಲಿ ಈ ಬಾರಿ 25 ಸಾವಿರ ಕುಟುಂಬಗಳಿಗೆ ಅಂದರೆ 1.25 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್‌ ವಿತರಿಸಲಾಗುತ್ತಿದೆ. ಶ್ರೀಪತಿಯವರ ಮಾರ್ಗದರ್ಶನದಲ್ಲಿ ಈ ಕಾರ್ಡ್‌ ನಿರ್ವಹಣೆ ಮಾಡಲಾಗುತ್ತಿದೆ. ಮಣಿಪಾಲ ವಿವಿ ಕುಲಾಧಿಪತಿ ಡಾ. ರಾಮದಾಸ್ ಪೈ ಅವರ 80ನೇ ಹುಟ್ಟು ಹಬ್ಬದ ಸಂದರ್ಭ ಈ ಕಾರ್ಡ್‌ಗಿದ್ದ 30 ಸಾವಿರ ರೂ. ವರೆಗಿನ ಸೌಲಭ್ಯವನ್ನು 50 ಸಾವಿರ ರೂ. ಗೆ ಏರಿಸಲಾಗಿದೆ. ಡಾ.ಎಚ್. ಬಲ್ಲಾಳರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಪೋಲೀಸರು ಮತ್ತು ಯಕ್ಷಗಾನ ಕಲಾರಂಗದವರಿಗೆ ಉಚಿತವಾಗಿ ಕಾರ್ಡ್‌ ವಿತರಿಸಲಾಗುತ್ತಿದೆ ಎಂದರು. ವೈದ್ಯರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಶೇ. 1ರಷ್ಟು ಕೆಲಸ ವಿಫಲವಾದಾಗ ಅವರನ್ನು ದೂಷಿಸುವ, ಆಸ್ಪತ್ರೆ ಎದುರು ಪ್ರತಿಭಟಿಸುವ, ವಾಟ್ಸಾಪ್ನಲ್ಲಿ ಹರಡುವ ಕೆಲಸ ಮಾಡಬಾರದು. ಸಾರ್ವಜನಿಕರು ವೈದ್ಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು. ಮಣಿಪಾಲ ವಿಶ್ವವಿದ್ಯಾಲಯ ಸಹಕುಲಾಧಿಪತಿ ಡಾ.ಎಚ್. ಬಲ್ಲಾಳ್ ಕಾರ್ಡ್‌ ವಿತರಿಸಿ ಮಾತನಾಡಿ, ಒಬ್ಬರಿಗೆ ಕಾಯಿಲೆ ಬಂದರೆ ಎರಡು ಸಮಸ್ಯೆ ಎದುರಾಗುತ್ತದೆ. ಆಸ್ಪತ್ರೆ ವೆಚ್ಚ ಭರಿಸುವುದು ಒಂದು ಸಮಸ್ಯೆಯಾದರೆ, ಅಷ್ಟು ಸಮಯ ದುಡಿಯಲಾಗದ್ದು ಎರಡನೇ ಸಮಸ್ಯೆ. ಇಂಥ ಸಂದರ್ಭದಲ್ಲಿ ಈ ಕಾರ್ಡ್‌ ಉಪಯೋಗವಾಗುತ್ತದೆ ಎಂದರು. ಆರೋಗ್ಯ ಮತ್ತು ಶಿಕ್ಷಣಕ್ಕೆ ಬಹಳ ಪ್ರಾಮುಖ್ಯ ನೀಡಬೇಕು ಎಂದು ಮಾಧವ ಪೈಗಳು ಮಣಿಪಾಲವನ್ನು ಕಟ್ಟಿ ಬೆಳೆಸಿದರು. ಅವರ ಹಾದಿಯಲ್ಲಿ ಜಿ. ಶಂಕರ್ ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಸಾಂಕೇತಿಕವಾಗಿ ಕಾರ್ಡ್‌ ವಿತರಿಸಲಾಯಿತು. ತುರ್ತು ರಕ್ತದಾನ ತಂಡದ ಪಟ್ಟಿ ಹಸ್ತಾಂತರ ನಡೆಯಿತು. 2015ರ ಸಾಲಿನಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಯಾದ 12 ಜೋಡಿಗಳಿಗೆ ಸರಕಾರದಿಂದ ನೀಡಿದ ಸಹಾಯಧನ ಠೇವಣೆ ಪತ್ರ ವಿತರಣೆ ಮಾಡಲಾಯಿತು. ಮಣಿಪಾಲ ತಾಂತ್ರಿಕ ವಿದ್ಯಾಲಯ ನಿರ್ದೇಶಕ ಡಾ. ಜಿ.ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಉಪಸ್ಥಿತರಿದ್ದರು. ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಶಂಕರ ಸಾಲ್ಯಾನ್ ವಂದಿಸಿದರು. ಶಿವರಾಮ ಕೆ. ಎಂ. ಕಾರ್ಯಕ್ರಮ ನಿರೂಪಿಸಿದರು.

🕔24 October 2016