ಮೊಗವೀರ ಸಮಾಜದಲ್ಲಿ ’ ಬಳಿ ’ ಅಥವಾ ’ ಬರಿ ’

ಎಲ್ಲಾ ಜನಾಂಗಗಳಲ್ಲಿ ಇರುವಂತೆ ಮೊಗವೀರ ಸಮಾಜದಲ್ಲೂ ಹುಟ್ಟಿನಿಂದ ತೊಡಗಿ ಮರಣದವರೆಗೆ ಬದುಕಿನ ಬೇರೆ ಬೇರೆ ಸಂದರ್ಭಗಳಿಗೆ ಸಂಬಂಧಪಟ್ಟಂತೆ ಆಚರಣೆಗಳು ರೂಡಿಯಲ್ಲಿದೆ. ಹುಟ್ಟು-ಸಾವಿನ ನಡುವೆ ಸುಖ-ದು:ಖಗಳೆರಡಲ್ಲೂ ಭಿನ್ನ-ಭಿನ್ನವಾದ ಆಚರಣೆಗಳನ್ನು ಕಾಣಬಹುದಾಗಿದೆ.

ಹುಟ್ಟು

ಮೊಗವೀರ ಸಮಾಜವು ಸಾಮಾನ್ಯವಾಗಿ ಅಳಿಕಟ್ಟು ಪದ್ದತಿಯನ್ನು ತಮ್ಮ ಕೌಟುಂಬಿಕ ಜೀವನದಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣುತ್ತೇವೆ. ಇದರನ್ವಯ ಮಾತೃ ಪ್ರಧಾನ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುವುದು ಸಾಮಾನ್ಯವಾಗಿದೆ.

ಮೊದಲನೆ ಹೆರಿಗೆಯು ತಾಯಿಯ ಮನೆಯಲ್ಲೇ ಮಾಡಿಸುತ್ತಾನೆ. ಈ ಹಿಂದೆ ಹೆರಿಗೆ ಮಾಡಿಸಿ ಅನುಭವವಿರುವ ’ಬಜ್ಜಳ್ತಿ’ ಎಂದು ಕರೆಸಿಕೊಂಡ ಹಿರಿಯ ಹೆಂಗಸರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಇತ್ತೀಚಿನ ಕೆಲವು ವರುಷಗಳಿಂದ ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ.

ಹೆರಿಗೆಯಾದ 7ನೇ ದಿವಸಕ್ಕೆ ಸೂತಕ ಕಳೆಯುವುದು, ಬ್ರಾಹ್ಮಣರ ಮನೆ ಇಲ್ಲವೇ ದೇವಸ್ಥಾನದಿಂದ ತೀರ್ಥ ತಂದು, ಸಗಣಿ ಸಾರಿಸಿದ ನಂತರ ಚಿಮುಕಿಸಿ ಶುದ್ದಗೊಳಿಸುತ್ತಾರೆ. ಈ ದಿನ ಮನೆಯಲ್ಲಿರುವ ಎಲ್ಲಾ ಬಟ್ಟೆಗಳನ್ನು ನೀರಿನಿಂದ ಶುದ್ದಗೊಳಿಸುವುದಲ್ಲದೆ: ಮನೆಯ ಪ್ರತಿಯೊಬ್ಬ ಸದಸ್ಯನು ಸ್ನಾನ ಮಾಡಿ ತುಳಸೀ ಕಟ್ಟಿಯಲ್ಲಿ ತಂದು ಇರಿಸಿದ ಪವಿತ್ರ ತೀರ್ಥವನ್ನು ಮಾವಿನ ಎಲೆ ಅಥವಾ ಮಾವಿನ ತುಂಡಿಯ ಮೂಲಕ ಮೈಮೇಲೆ ಸಿಂಪಡಿಸಿಕೊಳ್ಳುವುದರೊಂದಿಗೆ ತೀರ್ಥದ ರೂಪದಲ್ಲಿ ಒಡಲಿಗೆ ಸ್ವೀಕರಿಸುತ್ತಾರೆ. ಈಗಲೂ ಈ ಪದ್ದತಿಯನ್ನು ಕಾಣಬಹುದಾಗಿದೆ.

ಹೆರಿಗೆಯಾದ 10ನೇ ದಿವಸಕ್ಕೆ ’ಅಮೆ ಮುಚ್ಚುವುದು’ ಎಂಬ ಸಂಪ್ರದಾಯವಿದೆ. ಮಗು ಜನಿಸಿದ ಕೂಡಲೇ ’ಕಸ’ ಎಂದು ಕರೆಯಲ್ಪಡುವ ಅದರ ಕಸುವನ್ನೆಲ್ಲ ಮಣ್ಣಿನ ಪಾತ್ರೆಯೊಂದರಲ್ಲಿ ಶೇಖರಿಸಿ ಹೊಂಡದಲ್ಲಿ ಹುಗಿದು, ಅದರ ಮೇಲೆ ಭದ್ರತೆಗೆಂಬಂತೆ ಒಂದು ಹಲಗೆ ಇಡುತ್ತಾರೆ. ಇದಕ್ಕೆ 'ಅಮೆ ಹೊಂಡ' ಎಂದು ಕರೆಯಲಾಗುತ್ತದೆ. ಅಮೆಗೆ ಬಂಧುಗಳನ್ನ ಕರೆಸುತ್ತಾರೆ. ಅನ್ನ, ಸಾರು, ಪಲ್ಯ, ಪಾಯಸ ಇತ್ಯಾದಿಗಳನ್ನೊಳಗೊಂಡ ಸಾಮಾನ್ಯ ಅಡುಗೆ ಮಾಡಲಾಗುತ್ತದೆ. ಬಿಜ್ಜಲ್ತಿ ಯಾನೆ ಬಿಜ್ಜಂತಿ (ಸೂಲಗಿತ್ತಿ)ಯೇ ಬಂದು ಬಾಣಂತಿಗೆ ಸ್ನಾನ ಮಾಡಿಸಬೇಕು. ನಂತರ ಅಮೆ ಹೊಂಡದ ಹತ್ತಿರ ಒಂದು ದೀಪ ಉರಿಸಿ, ಐದು ದೋಸೆಯನ್ನು ಆ ಹೊಂಡಕ್ಕೆ ಸುತ್ತು ತಿರುಗಿ (ನಿವಾಳಿಸಿ) ದೂರ ದೀಪ ಉರಿಸಿ, ಐದು ದೋಸೆಯನ್ನ ಆ ಹೊಂಡಕ್ಕೆ ಸುತ್ತು ತಿರುಗಿ (ನಿವಾಳಿಸಿ) ದೂರ ಎಸೆಯುತ್ತಾರೆ. ಬಿಜ್ಜಲ್ತಿ ಮೂರು ಮುಷ್ಟಿ ಮಣ್ಣನ್ನು ಹೊಂಡಕ್ಕೆ ಹಾಕುತ್ತಾಳೆ. ತದನಂತರ ಹೊಂಡ ಮುಚ್ಚಿ, ಅದರ ಮೇಲೆ ಬಾಳೆ ಗಿಡವೋ ಬಸಳೆ ಬಳ್ಳಿಯೋ ನೆಡುತ್ತಾರೆ.

ಉಡ ಉಡ ಬೇನೆ ಬನ್ನಗ ಒಕ್ಕನೂಲು ಕಡಿತ್ತೇರ್, ನೇಲೆ ಪಾಡ್ಯೆರ್, ಅಂಗೈಡ್ ಎಣ್ಣೆ ಪಾಡ್ಡ್ ಬಂಜಿ ಪ್ರಜೆಯರ್, ಮೂಜಿ ಸರ್ತಿ ಈಸನಣ್ ಬಾಲೆ ಜನನಾಂಡ್, ಕೆಲಟ್ ಕಾಂಟಿ ಬೊಟ್ಟಾಯೆರ್, ಕದ್ರ ವೋಡಿಗೆ ಗ್ವತ್ತರ್, ಪುಟ್ಟಿ ಪುಲಟ್ ಪೊವೊಲು ಕುದ್ಧೆರ್, ಚಂಡಿ ನೀರ್ಡ್ ಮೀಪಯೆರ್ ಮೂಜನೇ ದಿನಾ ಮೂಜೆಟ್ ಮುಚ್ಚಿಲಮೆ, ಐನೆಟ್ ಐನಮೆ, ಪತ್ತೊಂಇ ಪದ್ನಾಜಿ ಆಮೆ ಕರಿತ್ತೆರ್, ಒಕ್ಕೆನೂಲು ಕಟ್ಯೆರ್, ತೊಟ್ಟಿಲ್ ಕಟ್ಯೆರ್, ಚಕ್ಕಣ ಪಾಡ್ಯೆರ್ ನಾಲಿಲ್ಲ ಪೊಂಜೊವು ಬತ್ತೆರ್, ಪೆತ್ತ ಕಿದೆತಡೆ ಬರ್ಪಿ ಪೊರ್ತುಗಾಂ ತೊಟ್ಟಿಲ್ಡ್ ಪಾಡ್ದ್ ಮೂಜಿ ಸರ್ತಿ ಪುದರ್ ಪುರಪ್ಪು ಲೆಪ್ತರ್ ಕೂಡೆ ಸಬೆಕ್ ಬಜಿಲ್ ಮೊರೆತ್ತದ್ ಪಟ್ಯೆರ್.( ತುಳು )
ಕನ್ನಡಾರ್ಥ: ಅಡಿಗಡಿಗೆ ನೋವು ಬರುವಾಗ ಉಂಡೆನೂಲು ಕಡಿದರು. ಕೈ ಹಗ್ಗ ಕಟ್ಟಿದರು. ಅಂಗೈಗೆ ಎಣ್ಣೆ ಹಾಕಿ ಹೊಟ್ಟೆಯನ್ನು ನೀವಿದರು. ಮೂರು ಸಲ ನೀವಿದಾಗ ಮಗುವಿನ ಜನನವಾಯಿತು. ಹೆರಿಗೆ ಮನೆಯಲ್ಲಿ ಗಂಟೆ ಬಾರಿಸಿದರು. ಕದ್ರ(?) ಹೆದರಿಕೆ ಕಳೆದರು. ಹುಟ್ಟಿದ ಜಾಗದಲ್ಲಿ ಹೊಕ್ಕುಳು ಕೊಯ್ದರು. ತಣ್ಣೀರಿನಲ್ಲಿ ಮೀಯಿಸಿದರು. ಮೂರನೇ ದಿನ ಮುಚ್ಚಿಲಮೆ ಎಂಬ ಹೊಲೆಗಳೆಯುವ ಸಂಸ್ಕಾರವನ್ನು ಐದರದಲ್ಲಿ ಐದರ ಅಮೆಯನ್ನು ಹನ್ನೊಂದು ಹದಿನಾರರ ಅಮೆಯನ್ನು ಕಳೆದರು. ತೊಟ್ಟಿಲು ಕಟ್ಟಿದರು. ಚೌಕ ಹಾಸಿದರು. ನಾಲ್ಕು ಮನೆಗಳ ಹೆಂಗಸರು ಬಂದರು, ಹಸು ಕೊಟ್ಟಿಗೆಗೆ ಬರುವ ಹೊತ್ತಿಗೆ ತೊಟ್ಟಿಲಲ್ಲಿ ಮಗುವನ್ನು ಇರಿಸಿ ಮೂರು ಸಲ ಹೆಸರು, ಹುಟ್ಟು ಹೇಳಿ ಕರೆದರು. ಕೂಡಿದ ಸಭೆಗೆ ಅವಲಕ್ಕಿ ಕಲಸಿ ಹಂಚಿದರು (ತುಳು ಸಾಹಿತ್ಯ ಚರಿತ್ರೆ)

ಪುಷ್ಪವತಿ ಯಾನೆ ಋತುಮತಿ

ಹೆಣ್ಣು ಪುಷ್ಪವತಿಯಾದಾಗ ವಿಶೇಷ ಆಚರಣೆ ಎಲ್ಲಾ ಸಮಾಜಗಳಲ್ಲಿಯೂ ಇರುತ್ತದೆ. ಹಾಗೇನೆ ಮೊಗವೀರ ಸಮಾಜದಲ್ಲಿಯೂ ಕೂಡ, ಅವಿಭಜಿತ ದ.ಕ. ಜಿಲ್ಲೆಯ ದಕ್ಷಿಣಕ್ಕೆ ಹೋದಂತೆ, ಅರ್ಥಾತ್ ತುಳುವ ಸಂಪ್ರದಾಯದಂತೆ ಹೆಣ್ಣು ಮೈ ನೆರೆದಾಗ ಮೂರು ಅಥವಾ ಐದು ಮಂದಿ ಹೆಂಗಸರನ್ನು ಕರೆಯುತ್ತಾರೆ. ಮನೆಯ ಎದುರಿನ ನಡು ಅಂಗಳದಲ್ಲಿ ಮಂಡಲವನ್ನು ಬರೆದು (ಹಾಕಿ), ಸುತ್ತಲೂ ನಾಲ್ಕು ಮಣ್ಣಿನ ಮೊಗೆಗಳಲ್ಲಿ ನೀರು ತುಂಬಿಸಿ ಕಳಸ ಇಡುತ್ತಾರೆ.ಸಿಪ್ಪೆ ಇರುವ ಏಳು ತೆಂಗಿನ ಕಾಯಿಗಳನ್ನು, ದಾರೆಬ್ಬಿಸಿ ಒಂದನ್ನೊಂದು ಜೋಡಿಸಿ ಮಂಡಲದ ಮೇಲೆ ಇರಿಸಿ, ಇದರ ಮೇಲೆ ಬಲಗಾಲು ಮುಂದಿಕ್ಕಿ ಮಂಡಲಕ್ಕೆ ಸುತ್ತು ಬಂದು ಪುಷ್ಪವತಿಯನ್ನು ಕುಳ್ಳಿರಿಸಿರುತ್ತಾರೆ.ಈಗಾಗಲೇ ಬಂದಿದ್ದ 4 ಮುತ್ತೈದೆಯವರು ಅಕ್ಷತೆ ಹಾಕಿ ನಾಲ್ಕು ಕಲಶವನ್ನಿಡಿದು ಶಿರದ ಮೇಲೆ ಹಾಕುತ್ತಾರೆ. ನಂತರ ಕೆಂದಾಳಿ ಸೀಯಾಳದ ನೀರು ಹಾಕಿ, ಹೀಗೆ ಅರಸಿನ ಹಾಕಿ ಸಂಪ್ರದಾಯದಂತೆ ಮಡಿವಾಳಗಿತ್ತಿ ಸ್ನಾನ ಮಾಡಿಸುತ್ತಾಳೆ. ಅಲ್ಲದೆ ತೆಂಗಿನ ಕಾಯಿಯನ್ನು ತುರಿದು ಹಾಕಿ ಮಿಶ್ರ ಮಾಡಿದ ಅನ್ನವನ್ನು, ಸೇರಿದ ಎಲ್ಲರೂ ಊಟ ಮಾಡುತ್ತಾರೆ. ಜೊತೆಗೆ ದಿನಂಪ್ರತಿ ಹದಿಮೂರು ದಿನ ತುಪ್ಪದೊಂದಿಗೆ ಓಮ, ಸಾಸಿವೆ, ಮೆಂತೆ, ಜೀರಿಗೆ, ಕಾಳು ಮೆಣಸು ಮತ್ತು ವಾಲೆಬೆಲ್ಲ ಹಾಕಿ ನೀರು ಸೇರಿಸಿ ಚೆನ್ನಾಗಿ ಅರೆದು ಪಾನೀಯವನ್ನು ಔಷಧಿ ರೂಪದಲ್ಲಿ ಋತುಮತಿ ಹೆಣ್ಣು ಸೇವಿಸಬೇಕು. ಮಾತ್ರವಲ್ಲದೆ ಹದಿಮೂರನೆ ದಿನ ಮಧ್ಯಾಹ್ನ ಮೂರು ಬಾಳೆ ಎಳೆಯನ್ನಿಟ್ಟು ಅಡುಗೆ ಬಳಸಬೇಕು. ಇದಕ್ಕೆ ’ಕರಪತ್ತಾಪುನ’ ಅಥವಾ ’ಮಡಕೆ ಕೊಡುವುದು’ ಎಂದು ಕರೆಯಲಾಗವುದು.

ದಕ್ಷಿಣದಿಂದ ಉತ್ತರಕ್ಕೆ ಅಂದರೆ ಕುಂದಾಪುರದ ಕಡೆ ಬಂದಂತೆ ಋತುಮತಿ ಆಚರಣೆಯಲ್ಲಿ ವ್ಯತ್ಯಾಸವಿರುವುದನ್ನು ಸ್ವಷ್ಟವಾಗಿ ಗಮನಿಸಬಹುದು. ಇಲ್ಲಿ ಹೆಣ್ಣು ಮೈನೆರೆದಾಗ ಮನೆಯಂಗಳದಲ್ಲಿರುವ ತೆಂಗಿನ ಮರದ ಕಟ್ಟೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾಳೆ. ಇಲ್ಲಿಯೂ ಕೂಡ ಐದು ಜನ ಮುತ್ತೈದೆಯರ ಪಾತ್ರ ಪ್ರಮುಖವಾಗಿದ್ದು ಇವರು ಆಕೆಗೆ ಎಣ್ಣೆಯ ಸ್ನಾನ ಮಾಡಿಸಿ, ಮುಖ್ಯವಾಗಿ ಸೀರೆ ಉಡಿಸಿ, ಬಾಚಿದ ತಲೆಗೆ ತೆಂಗಿನ ಹಿಂಗಾರವನ್ನು ಮುಡಿಸುತ್ತಾರೆ. ಒಂದು ತರದ ಸಂತೋಷದ ವಾತಾವರಣವಿರುವ ಈ ಸಂದರ್ಭದಲ್ಲಿ ಸಿಹಿ ಹಂಚುತ್ತಾರೆ. ತುಳುವ ಸಂಪ್ರದಾಯದಲ್ಲಿ ಪಾನೀಯ ರೂಪದ ಔಷಧ ನೀಡಿದರೆ ಈ ಕಡೆ ಕುಚ್ಚಲಕ್ಕಿ (ಕೊಚ್ಚಿಗೆ ಅಕ್ಕಿ) ಮತ್ತು ಸುಸೂಪ್ಯ (ಸತಾವೆ)ವನ್ನು ಚೆನ್ನಾಗಿ ಹುರಿದು ಪುಡಿ ಮಾಡಿ ಬೆಲ್ಲ ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ತಯಾರಿಸಿದ ಉಂಡೆ ರೂಪದ ಔಷದಿ ನೀಡುತ್ತಾರೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ, ಐದನೇ ದಿನದ ಕಾರ್ಯಕ್ರಮ, ಋತುಮತಿ ಹೆಣ್ಣನ್ನು ಮನೆಯಂಗಳದಲ್ಲಿ ಮಣೆಯ ಮೇಲೆ ಕುಳ್ಳಿರಿಸಲಾಗುತ್ತದೆ. ಈಗಾಗಲೆ ನೀರು ತುಂಬಿಸಿ ವೀಳ್ಯದೆಲೆ, ಅಡಿಕೆ, ಮಾವಿನೆಲೆ-ಹಲಸಿನೆಲೆಗಳನ್ನು ಹಾಕಿ ಸಿದ್ದಪಡಿಸಿಟ್ಟಿದ ಮಣ್ಣಿ ಕಲಶ (ಪಾತ್ರೆ) ಐದರಲ್ಲಿ ಒಂದನ್ನು ಮಡಿವಾಳ್ತಿ ಹಾಗೂ ಉಳಿದ ನಾಲ್ಕನ್ನು ನೆರೆದ ನಾಲ್ಕು ಮಂದಿ ಮುತ್ತ್ಯೆದೆಯರು ಅವಳ ಶಿರದ ಮೇಲೆ ಹಾಕಿ (ಪ್ರೋಕ್ಷಿಸಿ) ತದನಂತರದಲ್ಲಿ ಸ್ನಾನ ಮಾಡಿಸಿ ಹೊಸ ಸೀರೆಯೊಂದಿಗೆ ಶೃಂಗಾರ ಮಾಡುತ್ತಾರೆ.

ದಕ್ಷಿಣಕ್ಕೆ ಹೋದಂತೆ ’ಮಡಕೆ ಕೊಡುವುದು’ ಎಂಬ ಸಂಪ್ರದಾಯವಿದ್ದರೆ ಉತ್ತರದ ಕಡೆ ಬಂದಂತೆ ’ಹುಗ್ಗಿ ಊಟ’ ಎಂದು ಕರೆಯಲ್ಪಡುವ ಆಚರಣೆ ರೂಢಿಯಲ್ಲಿದೆ. ಇಲ್ಲಿ ಬೆಳ್ತಗೆ ಅಕ್ಕಿಯಿಂದ ಮಾಡಿದ ಅನ್ನಕ್ಕೆ ಸ್ವಲ್ಪ ಬೆಲ್ಲ ಮತ್ತು ತೆಂಗಿನಕಾಯಿ ಮಿಶ್ರಣ ಮಾಡಿ ಊಟದ ಸಮಯದಲ್ಲಿ ಪುಷ್ಪವತಿಗೂ ಹಾಗೂ ನೆರೆದವರೆಲ್ಲರಿಗೂ ಬಡಿಸುತ್ತಾರೆ.ಇದನ್ನು ’ಹುಗ್ಗಿ ಊಟ’ ಎಂದು ಕರೆಯಲಾಗುತ್ತದೆ. ಋತುಮತಿ ಸಮಾರಂಭ ಮುಗಿದ ದಿನದ ರಾತ್ರಿ ಪುಷ್ಪವತಿಯ ’ಬಳಿ’ ತಪ್ಪಿಸಿ ವಾಸಿಸಬೇಕೆಂಬ ಸಂಪ್ರದಾಯವನ್ನು ನೋಡಬಹುದಾಗಿದೆ.

ಮದುವೆಯ ಆಚರಣೆ

ಗಂಡು-ಹೆಣ್ಣು ಸತಿ-ಪತಿಯಾಗಿ ಪರಸ್ಪರ ಅರಿತು ಹೊಂದಾಣಿಕೆಯಿಂದ ಕೂಡಿ ಬಾಳುವುದಕ್ಕೆ ಹಿರಿಯರು ರೂಪಿಸಿದ ಕಟ್ಟುಕಟ್ಟಳೆಯ ಧಾರ್ಮಿಕ ಚೌಕಟ್ಟಿನೊಳಗೆ ನಡೆಸುವ ಸಾಮಾಜಿಕ ಆಚರಣೆಯೇ ಮದುವೆ. ಬೇರೆ ಬೇರೆ ಜಾತಿ ಅಥವಾ ಸಮಾಜದಲ್ಲಿ ಬೇರೆ ಬೇರೆ ಆಚರಣೆ-ಸಂಪ್ರದಾಯಗಳು ಇದ್ದರೂ ಕೂಡ ಮದುವೆ ಎಂಬುದು ಗಂಡು-ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ಬೆಸೆದು ಪವಿತ್ರವಾದ ಆದರ್ಶವಾದ ಸಾಂಸಾರಿಕ ಜೀವನಕ್ಕೆ ಮುನ್ನುಡಿ ಬರೆಯುವ ಸುಸಂದರ್ಭ ಇದಾಗಿದೆ.

ದ್ರಾವಿಡ ಸಂಸ್ಕೃತಿಯ ಮಾತೃಪ್ರಧಾನವಾದ ಅಳಿಯ ಸಂತಾನ ಪದ್ದತಿಯ ಕಟ್ಟಕಟ್ಟಳೆಯನ್ನು ಮೈಗೂಡಿಸಿಕೊಂಡು ಕೂಡು ಕಟ್ಟುವೆಂಬ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಬದುಕುವ ಮೊಗವೀರ ಸಮಾಜದಲ್ಲಿ ’ಬಳಿ’ ಪ್ರಾಮುಖ್ಯವಾದ ಸ್ಥಾನ ಪಡೆಯುತ್ತದೆ. ಇಂದಿನ ಆಧುನಿಕ ಬದುಕಿಗೆ ಮೈಯೊಡ್ಡಿದ ಇತರೆ ಸಂಪ್ರದಾಯದಂತೆ ಮೊಗವೀರ ಸಮಾಜದಲ್ಲೂ ’ಚಿಕ್ಕ ಸಂಸಾರ ಸುಖಕ್ಕೆ ಆಧಾರ’ ಎಂಬ ಆಧುನಿಕ ಸಂಸಾರ ಶ್ಲೋಕವನ್ನು ಪಠಿಸುತ್ತಾ ಅವಿಭಕ್ತ ಕುಟುಂಬ ಪದ್ಧತಿಗೆ ತಿಲಾಂಜಲಿ ಹೇಳುತ್ತಿರುವುದು ಬೇರೆ ವಿಷಯ. ಹಿಂದಿನಂತೆ ಇಂದು ಕೂಡ ಗಂಡು ಹೆಣ್ಣಿನ ತಾಯಿ ಬಳಿ ತಪ್ಪಿದರೆ ಮಾತ್ರ ಮದುವೆ ಮಾತುಕತೆ ಎಂಬುದು ನಮ್ಮ ಎದುರಿಗಿರುವ ಕಟು ಸತ್ಯ.
ಉದಾ: ’ಕಾಂಚನ್ ಬಳಿ’ಯ ತಾಯಿ ಹಡೆದ ಹುಡುಗಿ ಅದೇ ಬಳಿಯ ತಾಯಿ ಹಡೆದ ಗಂಡು ಹುಡುಗನೊಂದಿಗೆ ಮದುವೆ ನಿಷೇದಿಸಲಾಗಿದೆ.

ಒಂದೇ ತಾಯಿ ಬಳಿಯ ಗಂಡು-ಹೆಣ್ಣು, ಅಣ್ಣ-ತಂಗಿಗೆ ಸಮಾನವಾಗಿದ್ದು, ರಕ್ತ ಸಂಬಂಧಿಗಳಾಗಿರುತ್ತಾರೆಂಬ ನಮ್ಮ ಹಿರಿಯರು ತಲತಲಾಂತರವಾಗಿ ನಂಬಿಕೊಂಡು ಬಂದ ಧೃಢ ನಂಬಿಕೆಗೆ ಇಂದು ವೈಜ್ಞಾನಿಕವಾಗಿಯೂ ಆ ಬಗ್ಗೆ ಸತ್ಯತೆ ಪಡೆದುಕೊಂಡಿರುವುದು ಕಾಣುತ್ತೇವೆ.

ಹೆಣ್ಣಿನ ತಾಯಿ ಬಳಿ ಗಂಡಿನ ತಂದೆ ಬಳಿ ಒಂದೇ ಆಗಿದ್ದರೂ ಮದುವೆಗೆ ’ಬಳಿ’ಯ ಅಡೆ ತಡೆ ಆಗುವುದಿಲ್ಲ. ಇಂದು ನಾವು ನೋಡುತ್ತಿರುವ ಸೋದರಿಕೆಯ ಮದುವೆ ಇದಕ್ಕೆ ಸ್ವಷ್ಟವಾದ ಸಾಕ್ಷಿಯಾಗಿದೆ. ಇದು ಮೊಗವೀರ ಸಮಾಜದಲ್ಲಿ ಮಾತ್ರವಲ್ಲದೆ ಬಿಲ್ಲವ, ಬಂಟ, ದೇವಾಡಿಗ, ಮಡಿವಾಳ ಇತರೆ ಸಮಾಜದಲ್ಲೂ ಹೇರಳವಾಗಿ ಕಾಣಬಹುದಾಗಿದೆ.
ಉದಾ: ’ಚಂದನ್ ಬಳಿ’ಯ ತಾಯಿ ಹೆತ್ತ ಹಣ್ಣು ಅದೇ ಬಳಿ ಹೊಂದಿದ ತಂದೆಯ ಮಗನೊಂದಿಗೆ ಮದುವೆ ಸಾಧ್ಯವಿದೆ.

ವಧು-ವರ ಅನ್ವೇಷಣೆ

ಭಾರತೀಯ ಸಂಸ್ಕೃತಿಯಲ್ಲಿ ಬಾಲ್ಯ ವಿವಾಹ ಪದ್ದತಿ ಈ ಹಿಂದೆ ಆಚರಣೆಯಲ್ಲಿ ಇರುವುದು ಇತಿಹಾಸದ ಪುಟ ತಿರುಗಿಸಿದಂತೆ ಗೋಚರಿಸುತ್ತದೆ. ಮೊಗವೀರ ಸಂಸ್ಕೃತಿಯಲ್ಲೂ ಬಾಲ್ಯ ವಿವಾಹಕ್ಕೆ ಆದ್ಯತೆ ನೀಡಲಾಗಿತ್ತು. ಈಗಲೂ ನಮ್ಮ ಹಿರಿಯ ವಯಸ್ಕರನ್ನು ಮಾತನಾಡಿಸಿದರೆ, ಸ್ವತ: ಅವರೆ ಬಾಲ್ಯ ವಿವಾಹ/ಋತುಮತಿಯಾಗುವ ಮೊದಲೇ ವಿವಾಹವಾಗಿರುವ ಸಂಗತಿಯನ್ನು ಬಿಚ್ಚಿಡುತ್ತಾರೆ. ಇಂದು ಕಾನೂನಿನ ಕಟ್ಟುನಿಟ್ಟಾದ ಕ್ರಮದಿಂದಾಗಿ ಬಾಲ್ಯ ವಿವಾಹ ಪದ್ದತಿಗೆ ತೆರೆ ಬಿದ್ದಿದೆ.

ಅವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಸಂಸಾರದಲ್ಲಿ ಸೋದರಿಕೆ ವಿವಾಹ ಸಂಬಂಧ ಹೆಚ್ಚಾಗಿ ನಡೆಯುತ್ತಿತ್ತು. ಇಲ್ಲಿ ಹಿರಿಯರ ತೀರ್ಮಾನವೇ ಪ್ರಮುಖವಾಗಿರುತ್ತಿತ್ತು. ಇದರಿಂದಾಗಿ ಹೆಣ್ಣು ಹುಡುಕುವುದು ಅಷ್ಟೊಂದು ಕಷ್ಟದಾಯಕವಾಗಿರಲಿಲ್ಲ. ಅಂದು ಗಂಡು-ಹೆಣ್ಣಿನ ಒಪ್ಪಿಗೆಯ ಪ್ರಮೇಯವೇ ಬರುತ್ತಿರಲಿಲ್ಲ. ಗಂಡು ಹೆಣ್ಣಿನ ಸೌಂದರ್ಯ/ ಚೆಂದದ ಪ್ರಶ್ನೆಯೇ ಏಳುತ್ತಿರಲಿಲ್ಲ. ಇಲ್ಲಿ ಕೇವಲ ಕೃಷಿ ಭೂಮಿ, ಮೀನುಗಾರಕೆ ಸಂಪಾದನೆ, ಮರ್ಯಾದೆ, ರಕ್ತ ಸಂಬಂಧ ಎಂಬಿತ್ಯಾದಿ ವಿಷಯಗಳೇ ಪ್ರಧಾನ ಪಾತ್ರವಹಿಸುತ್ತಿದ್ದವು.

ಇಂದು ಪರಿಸ್ಥಿತಿ ಗಣನೀಯವಾಗಿ ಬದಲಾಗಿದೆ. ವಿದ್ಯೆ ಮತ್ತು ಸೌಂದರ್ಯಕ್ಕೆ ಪ್ರಥಮ ಆದ್ಯತೆ ಇದೆ. ದುಡಿತ-ಗೌರವಗಳಿಗೆ ಮನ್ನಣೆ ಇದೆ. ಕನಿಷ್ಟ 18 ವರ್ಷ ವಯಸ್ಸಿನ ಮಿತಿಯ ಕಟ್ಟುಪಾಡಿವೆ. ಗಂಡು-ಹೆಣ್ಣಿನ ಒಪ್ಪಿಗೆಗೆ ಮುಕ್ತ ಅವಕಾಶವಿದೆ.ಜಾತಕವು ಗಣನೆಗೆ ಬರುತ್ತದೆ. ಒಟ್ಟಾರೆ ಹೆಣ್ಣು ಹುಡುಕುವುದರಲ್ಲಿ ಅಂದು-ಇಂದಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ಇವೆಲ್ಲವನ್ನೂ ವಿಮರ್ಶಿಸಿದಾಗ ಹೆಣ್ಣು ಹುಡುಕುವುದು ಅಷ್ಟು ಸುಲಭದ ಮಾತಲ್ಲವೆಂಬುದು ಇಂದಿನ ಕಟು ಸತ್ಯವಾಗಿವೆ.

ಗಂಡು ಹೆಣ್ಣಿನ ಬಳಿ ಹೊಂದಾಣಿಕೆ ಆದ ನಂತರವೇ ಹೆಣ್ಣು ನೋಡುವ ಕ್ರಮ ಸರ್ವೆ ಸಮಾನ್ಯವಾಗಿದೆ...ಕುಟುಂಬದ ಹಿರಿಯರು ತಮಗೆ ಸರಿಹೊಂದುವ ಕುಟುಂಬದ ಮನೆಯ ಹೆಣ್ಣನ್ನು ಗುರುತಿಸಿ ಸಂಬಂಧದ ಪೂರ್ವಭಾವಿ ಮಾತುಕತೆಗಾಗಿ ಮೊದಲು ಹೆಣ್ಣಿನ ಮನೆಗೆ ಗಂಡಿನ ಕಡೆಯವರು ಹೋಗುತ್ತಾರೆ. ಹಿಂದೆ ಈ ಸಂದರ್ಭದಲ್ಲಿ ಗಂಡು ಹೋಗುವಂತಿರಲಿಲ್ಲವಾದರೂ ಈಗಿನ ಗಂಡು ಈ ಸಮಯದಲ್ಲಿ ಉಪಸ್ಥಿತನಿರುವುದು ಮಾಮೂಲಾಗಿದೆ. ಈಗಾಗಲೇ ಮುನ್ಸೂಚನೆ ಪಡೆದ ಹೆಣ್ಣಿನ ಮನೆಯ ಯಜಮಾನ ಬಂದವರಿಗೆ ಕಾಲು ತೊಳೆಯಲು ನೀರು ನೀಡಿ, ಗೌರವಪೂರ್ವಕವಾಗಿ ಸ್ವಾಗತಿಸುತ್ತಾನೆ. ಬೆಲ್ಲ ನೀರು, ವೀಳ್ಯ ನೀಡಿ ಉಪಚರಿಸುತ್ತಾರೆ. ಈ ಸಮಯದಲ್ಲೇ ಗಂಡಿನ ಕಡೆಯವರು ಸಂಬಂಧ ಬೆಳೆಸುವ ಮನೆಯ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ.

ಮನೆಯ ಹಿರಿಯರ ಕರೆಯಂತೆ ಹುಡುಗಿಯು ಗಂಡಿನ ಕಡೆಯವರಿಗೆ ಲಘು ಉಪಹಾರ ತಂದ ನೀಡುತ್ತಾಳೆ. ಬಂದ ಅತಿಥಿಗಳಲ್ಲಿ ಹಿರಿಯರು ಹುಡುಗಿಯ ಹೆಸರು, ವಿದ್ಯೆ, ಇತ್ಯಾದಿಗಳನ್ನು ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಸಂದರ್ಭದಲ್ಲಿ ಹುಡುಗ-ಹುಡುಗಿಯರ ಒಪ್ಪಿಗೆಗಾಗಿ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಮಾಡಿಕೊಡುತ್ತಿರುವುದು ನೋಡಬಹುದಾಗಿದೆ.

ಹಿಂದೆ ಅವಿಭಕ್ತ ಕುಟುಂಬ ಪದ್ದತಿಯಮತೆ ಒಂದೇ ಮನೆಯಲ್ಲಿ ಹಲವರು ಒಟ್ಟಿಗೆ ಬದುಕು ಸಾಗಿಸುತ್ತಿದ್ದು ಮನೆಯ ಯಜಮಾನನ ತೀರ್ಮಾನವೇ ಅಂತಿಮವಾಗಿತ್ತು. ಯಾರೂ ಎದುರು ಮಾಡನಾಡುವಂತಿರಲಿಲ್ಲ. ಯಜಮಾನನ ತೀರ್ಮಾನವೇ ಎಲ್ಲರ ಒಪ್ಪಿಗೆ ಇದೆ ಎಂದು ಅರ್ಥೈಸಲಾಗುತ್ತಿತ್ತು. ಎರಡು ಕುಟುಂಬದ ಹಿರಿಯರು ನೋಡಿ ಗಂಡು-ಹೆಣ್ಣಿನ ಮದುವೆ ನಡೆಯುತ್ತಿತ್ತು. ಇದು ನಿರಂಕುಶ ಯಜಮಾನಿಕೆಯಂತೆ ತೋರಿದರೂ ಅಂದು ವಧು-ವರರು ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರಾಗಿರುವುದರಿಂದ ಹಿರಿಯರ ತೀರ್ಮಾನದ ಅನಿವಾರ್ಯತೆ ಇತ್ತು ಎಂಬುದು ಸ್ವಷ್ಟವಾಗುತ್ತದೆ. ಇಂದು ಕಾಲ ಬದಲಾಗಿಇದೆ. ಗಂಡು ಹೆಣ್ಣ ಪರಸ್ಪರ ಒಪ್ಪಿಗೆ ಸೂಚಿಸಿದ ನಂತರವೇ ಮುಂದಿನ ಕಾರ್ಯಕ್ರಮ ನಡೆಸಯುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗಂತೂ ತಂದೆ-ತಾಯಿ ಅಥವಾ ಕುಟುಂಬದ ಹಿರಿಯರಿಗೆ ಹೆಣ್ಣು-ಗಂಡು ಹುಡುಕುವ ಅವಕಾಶ ಒದಗುವ ಪ್ರಮೇಯವೇ ವಿರಳ ಎನ್ನಬಹುದು.

ಮೊದಲ ದಿನ ಹುಡುಗಿ ಮನೆಗೆ ಬಂದು ಎಲ್ಲವನ್ನೂ ಅವಲೋಕಿಸಿ ಕೊನೆಯಲ್ಲಿ ಹುಡುಗಿ ಒಪ್ಪಿಗೆಯಾಗದಿದ್ದರೆ ಗಂಡಿನ ಕಡೆಯವರು ಮತ್ತೆ ಹೇಳುತ್ತೇವೆ ಎಂಬ ಉತ್ತರ ಹೇಳಿ, ಸಂಬಂಧ ಅಲ್ಲಿಗೆ ಮುಕ್ತಾಯಗೊಳಿಸುತ್ತಾರೆ. ಒಂದುವೇಳೆ ಒಪ್ಪಿಗೆಯಾದರೆ ತಮ್ಮ ಮನೆಗೆ ’ಇಂತಹ ದಿನ’ ಬಂದು ಹೋಗಬೇಕೆಂಬ ಹೇಳಿಕೆ ನೀಡುತ್ತಾರೆ. ಆದರೆ ಈ ದಿನ ಉಪಹಾರ ಸ್ವೀಕರಿಸುತ್ತಾರೆ ವಿನ: (ಹುಡುಗಿ ಮನೆಯಲ್ಲಿ) ಹಿಂದಿನಂತೆ ಈಗಲೂ ಊಟ ಮಾಡುವ ಸಂಪ್ರದಾಯ ಇರುವುದಿಲ್ಲ.

ವರನ ಮನೆಯಲ್ಲಿ ಮಾತುಕತೆ :ಹುಡುಗನ ಮನೆಯವರ ಹೇಳಿಕೆ(ಕೋರಿಕೆ)ಯಂತೆ ನಿಗದಿತ ದಿವಸ ಹುಡುಗಿ ಮನೆಯ ಹಿರಿಯರು ಗುರಿಕಾರರ ಸಮೇತರಾಗಿ ಗಂಡಿನ ಮನೆಗೆ ಬರುತ್ತಾರೆ. ಸಂಪ್ರದಾಯಬದ್ದವಾಗಿ ಮನೆಯ ಹಿರಿಯರು / ಗುರಿಕಾರರು ನೀರು ನೀಡುವುದರ ಮೂಲಕ ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಹುಡುಗಿ ಮನೆಗೆ ಬರುವ ಪದ್ದತಿ ಹಿಂದಿನಿಂದಲೂ ಇರುವುದಿಲ್ಲ.
ಉಪಹಾರ ಸ್ವೀಕರಿಸಿದ ಬಳಿಕ ಮದುವೆ ಸ್ಥಳ, ದಿನ ಇತ್ಯಾದಿಗಳ ಬಗ್ಗೆ ಸ್ಥೂಲವಾದ ಚರ್ಚೆ ನಡೆಯುತ್ತದೆ. ಹಿಂದೆ ಮದುವೆ ಮನೆಯಲ್ಲಿಯೇ ನಡೆಯುತ್ತಿದ್ದು, ಇಂದು ಮದುವೆಯಲ್ಲಿ ಮಹತ್ತರ ಬದಲಾವಣೆಯಾಗಿರುವುದರಿಂದ ಮಾತುಕತೆಗಳಲ್ಲಿಯೂ ಮಾರ್ಪಾಡಾಗಿರುವುದು ಸಾಮಾನ್ಯವಾಗಿದೆ.ಮನೆ ಮದುವೆ ವಿರಳವಾಗಿ ಸಭಾಭವನ-ಕಲ್ಯಾಣ ಮಂಟಪ ಇತ್ಯಾದಿ ಸ್ಥಳಗಳಲ್ಲಿ ಸಮಾರಂಭ ಏರ್ಪಡಿಸುವುದು ರೂಢಿಯಾಗಿದೆ. ಸ್ಥಳ- ದಿನ ನಿಗದಿಪಡಿಸಿದ ನಂತರ ಕೈಕಾಲು ತೊಳೆದು ಮನೆದೇವರು / ದೈವವನ್ನು ಪ್ರಾರ್ಥಿಸುವರು. ಈ ದಿನದ ಮತ್ತೊಂದು ವಿಶೇಷವೆಂದರೆ ಗಂಡಿನ ಮನೆಗೆ ಮೊದಲು ಬಂದಿದ್ದರೂ ಕೂಡ ಸರಳ ರೀತಿಯಲ್ಲಿ ಮಾಡಿದ ಅಡಗೆ ಊಟ ಮಾಡುವುದು. ಇತ್ತೀಚೆಗ ಈ ಸರಳ ಎಂಬುವುದು ಹೋಗಿ ಬಿಗು ಊಟೋಪಚಾರವನ್ನು ಎಲ್ಲಾ ಕಡೆ ಕಾಣುತ್ತಿದ್ದೇವೆ. ಕೊನೆಯಲ್ಲಿ ಹೆಣ್ಣಿನ ಕಡೆಯವರು ಮನೆಯ ಯಜಮಾನರಿಗೆ ವೀಳ್ಯವನ್ನು ನೀಡಿ ವಧುವಿನ ಮನೆಗೆ ’ನಿಶ್ಚಯ’ ಅಥವಾ ’ನಿಶ್ಚಿತಾರ್ಥ’ ಕ್ಕೆ ಬರುವಂತೆ ಹೇಳಿಕೆ ನೀಡಿ ಹೋಗುವರು.

ನಿಶ್ಚಿತಾರ್ಥ

ನಿಶ್ಚಿತಾರ್ಥ ಮದುವೆಗೆ ಮೊದಲು ಗಂಡಿನ ಮನೆ ಮಾತುಕತೆಯ ನಂತರ ಹೆಣ್ಣಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭ.ಇದಕ್ಕೆ ನಂಬಿಗೆ-ನಿಶ್ಚಯ ಎಂಬಿತ್ಯಾದಿ ಹೆಸರೂ ಕೂಡ ಪ್ರಚಲಿತದಲ್ಲಿದೆ. ಮದುವೆ ಮುಂಚಿನ ಬಹು ಪ್ರಮುಖವಾದದ ಆಚರಣೆಯೆ ನಿಶ್ಚಿತಾರ್ಥವಾಗಿದೆ. ಮೊಗವೀರ ಸಮಾಜದಲ್ಲಿ ಗುರಿಕಾರರ ನೇತೃತ್ವದಲ್ಲಿ ನಡೆಯುವ ಮದುವೆಯ ಪೂರ್ವಭಾವಿಯಾದ ಈ ಶುಭ ಕಾರ್ಯಕ್ಕೆ ಕುಟುಂಬದ ಎಲ್ಲಾ ವಿಭಾಗದ ಬಂಧುಗಳನ್ನು, ನೆಂಟರಿಸ್ಥರನ್ನು, ಊರ ಸ್ವಜಾತಿ ಬಾಂಧವರನ್ನು ಬಾಯ್ದೆರೆ ಆಮಂತ್ರಣದ ಮೂಲಕ ಆಹ್ವಾನಿಸುತ್ತಾರೆ. ಈ ಸಂದರ್ಭದಲ್ಲಿ ಊರ ಸ್ವ-ಜಾತಿ ತರುಣರು ಚಪ್ಪರ ಇತ್ಯಾದಿ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಾರೆ. ಇತ್ತೀಚೆಗೆ ಸ್ವ-ಜಾತಿ ಬಾಂಧವರಲ್ಲದೇ ಇತರರೂ ಸಹಕರಿಸುತ್ತಿರುವುದು ಕಾಣಬಹುದಾಗಿದೆ.

ನಿಶ್ಚಿತಾರ್ಥದ ದಿನ ಸುಮಾರು 10 ರಿಂದ 25 ಮಂದಿ ತನಕ ಹುಡುಗನ ಕಡೆಯವರು ಗುರಿಕಾರರ ನೇತೃತ್ವದಲ್ಲಿ ಆಗಮಿಸುತ್ತಾರೆ. ಕೆಲವೊಮ್ಮೆ ಇವರ ಸಂಖ್ಯೆ 25 ರಿಂದ 75 ರ ತನಕವೂ ಏರಿಕೆಯಾದ ಸಂಧರ್ಭ ಅಲ್ಲಲ್ಲಿ ಕಾಣಬರುತ್ತದೆ. ಮುಖ್ಯವಾಗಿ ಈ ಕಾರ್ಯದಲ್ಲಿ ಹುಡುಗನ ಸಹೋದರಿಯ ಉಪಸ್ಥಿತಿ ಇರಲೇಬೇಕೆಂಬ ಸಂಪ್ರದಾಯ ಎಲ್ಲಾ ಕಡೆ ಕಂಡು ಬರುತ್ತದೆ. ಒಂದು ವೇಳೆ ಹುಡುಗನಿಗೆ ಒಡ ಹುಟ್ಟಿದ ಸಹೋದರಿ ಇಲ್ಲದಿದ್ದರೆ ಸಹೋದರಿಗೆ ಸಮಾನಳಾದ ಇನ್ನೊಬ್ಬಾಕೆಯನ್ನು ಸಹೋದರಿ ಸ್ಥಾನದಲ್ಲಿ ತುಂಬಲು ಕರೆ ತರುವುದನ್ನು ನೋಡಬಹುದಾಗಿದೆ.

ಎರಡು ಕಡೆಯವರು ನೆಂಟಸ್ಥಿಕೆಗೆ ಒಪ್ಪಿ ತಮ್ಮೊಳಗೆ ಒಂದು ತೀರ್ಮಾನಕ್ಕೆ ಬಂದ ನಂತರ ಇಕ್ಕಡೆಯವರು ಸಿಂಗಾರದ ಹೂ ಹೊಂದಿದ ಪೂಜಾ ಸಾಮಾಗ್ರಿಗಳೊಂದಿಗೆ ಊರಿನ ಗ್ರಾಮ ದೇವತೆ ಅಥವಾ ಕುಲ ದೇವಸ್ಥಾನಕ್ಕೆ ’ದೇವರ ಒಪ್ಪಿಗೆ’ ಪಡೆಯಲು ತೆರಳುತ್ತಾರೆ. ದೇವರಿಗೆ ಪೂಜೆ ನೀಡಿ ಪ್ರಾರ್ಥಿಸುತ್ತಾರೆ. ಗುರಿಕಾರರ ನೇತೃತ್ವದಲ್ಲಿ ಹುಡುಗಿ ಮನೆಗೆ ಬಂದ ಇಕ್ಕಡೆಯ ತಂಡ ತುಳಸೀ ಕಟ್ಟೆಯ ಮುಂಭಾಗದಲ್ಲಿ ಎದುರು-ಬದುರಾಗಿ ಹಾಕಿದ ಚಾಪೆಯ ಮೇಲೆ ಪ್ರತ್ಯೇಕ ಪ್ರತ್ಯೇಕವಾಗಿ ಬಂದು ಸೇರುವರು. ಪರಸ್ಪರ ಹೆಸರನ್ನು ವಿನಿಯಮ ಮಾಡಕೊಳ್ಳುವರು. ನಂತರ ನಡೆಯುವದೇ ವೀಳ್ಯ ಪಟ್ಟಿಯ ವಿತರಣೆ. ಮೊಗವೀರ ಸಮಾಜದಲ್ಲಿ ಗುರಿಕಾರರಿಗೆ ಎಷ್ಟು ಪ್ರಾಧಾನ್ಯತೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ವೀಳ್ಯಕ್ಕೆ ಪ್ರಾಮುಖ್ಯತೆ ಇರುವುದು ಯಾವುದೇ ಶುಭ ಕಾರ್ಯದಲ್ಲೂ ಗಮನಿಸಬಹುದು.ಅದರಲ್ಲೂ ಮದುವೆ ಶುಭ ಕಾರ್ಯದಲ್ಲಿ ವೀಳ್ಯದ ಗೌರವ ಬಹಳಷ್ಟು ಇರುವುದು ಕಾಣಬಹುದು. ವೀಳ್ಯ ಕೊಡುವುದರಲ್ಲಿ ಸ್ವಲ್ಪ ಹೆಚ್ಚ ಕಡಿಮೆಯಾದರೂ ದೊಡ್ಡ ರಾದ್ದಾಂತವೇ ನಡೆದ ಅನೇಕ ನಿದರ್ಶನಗಳನ್ನು ಹಿರಿಯರು ನಮ್ಮ ಎದುರು ಅನಾವರಣಗೊಳಿಸುತ್ತಾರೆ. ನೇತೃತ್ವ ವಹಿಸಿದ ಗುರಿಕಾರರೇ ವೀಳ್ಯಪಟ್ಟಿ ವಿತರಣೆ ಕಾರ್ಯಕ್ರಮವನ್ನು ಸಂಪ್ರದಾಯಬದ್ದವಾಗಿ ನಿರ್ವಹಿಸುತ್ತಾರೆ.ಈ ಕೆಳಕಾಣಿಸಿದ (ಬಗ್ವಾಡಿ ಹೋಬಳಿಯಂತೆ) ಕ್ರಮಬದ್ದತೆಯಲ್ಲಿ ವೀಳ್ಯ ವಿತರಣೆ ನಡೆಯುತ್ತದೆ.
ಪ್ರಥಮ ವೀಳ್ಯ - ದೇವರಿಗೆ
ದ್ವಿತೀಯ ವೀಳ್ಯ - ಗ್ರಾಮ ದೇವತೆಗೆ
ತೃತೀಯ ವೀಳ್ಯ - ಬಾರ್ಕೂರು ಹೋಬಳಿಗೆ
ನಂತರದ ವೀಳ್ಯ - ಒತ್ತಿನ ಗುರಿಕಾರರಿಗೆ.
. . . . . . . ಮೊದಲಾದವರಿಗೆ.

ಈ ಶುಭ ಕಾರ್ಯದ ಯಜಮಾನತ್ವ ಪಡೆದ ಎರಡು ಕಡೆಯ ಗುರಿಕಾರರು ಮದುಮಕ್ಕಳ ಹೆಸರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಕಾರ್ಯವನ್ನು ನಡೆಸಿಕೊಡುತ್ತಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಹುಡುಗಿಯ ಕಡೆಯವರು ಹುಡುಗನನ್ನೂ, ಹುಡುಗನ ಕಡೆಯವರು ಹುಡುಗಿಯನ್ನೂ ’ನಮ್ಮದು’ ಎಂದು ಸಂಭೋಧಿಸುವುದು.

ವೀಳ್ಯ ವಿತರಣೆಯ ನಂತರ ಹುಡುಗಿಗೆ ತಂದ ಹೊಸ ಸೀರೆ ಉಡಿಸಿ, ಸಿಂಗಾರ ಮುಡಿಸಿ, ಚಿನ್ನಾಭರಣಗಳಿಂದ ಶೃಂಗರಿಸಿ, ಐದು ಅಥವಾ ಒಂಭತ್ತು ಜನ ಮುತ್ತೈದೆಯರ ಮೂಲಕ ನಿಶ್ಚಿತಾರ್ಥದ ಆರತಿ ಬೆಳಗಲಾಗುತ್ತದೆ. ಅಲ್ಲದೆ ನಿಶ್ಚಿತಾರ್ಥದ ಸಂಕೇತವಾಗಿ ಕೈಕಾಲುಗಳಿಗೆ ಬೆಳ್ಳಿ ಕಾಲುಂಗರ ತೊಡಿಸಲಾಗುತ್ತದೆ.

ನಿಶ್ಚಿತಾರ್ಥದ ಆಚರಣೆ ಮತ್ತು ಸಂಪ್ರದಾಯ ಎಲ್ಲಾ ಕಡೆ ಒಂದೇ ರೀತಿ ಇರುವುದಿಲ್ಲವೆಂಬುದು ಉತ್ತರದಿಂದ ದಕ್ಷಿಣದ ಕಡೆ ಹೋದಂತೆ ಭಾಸವಾಗುತ್ತದೆ. ಪರಸ್ಪರ ಹಸ್ತಾಂತರಗೊಂಡ ವೀಲ್ಯದಡಿಕೆಯನ್ನು ಹೋಳು ಮಾಡಿ ಅಲ್ಲಿ ನೆರೆದ ಎಲ್ಲರೂ ವೀಳ್ಯದೆಲೆಯೊಂದಿಗೆ ತಿನ್ನುವ ಸಂಪ್ರದಾಯವಿದೆ. ಹುಡುಗನ ಮನೆಯವರು ಸಂಪ್ರದಾಯ ಬದ್ದವಾಗಿ ನೀಡಿದ ಹೊಸ ಸೀರೆಯನ್ನು ತೊಟ್ಟ ಹುಡುಗಿಯು ಹೊರ ಬಂದಾಗ ಪುನ: ಎಲ್ಲರೂ ತುಳಸಿ ಕಟ್ಟೆ ಎದುರು ಬಂದು ಸೇರುವರು. ಯಜಮಾನ ಅಥವಾ ಗುರಿಕಾರ ತಲೆಗೆ ಮುಂಡಾಸು ಧರಿಸಿ ಕಲಶ ಹಾಗೂ ತುಳಸಿಗೆ ದೂಪದಾರತಿ ಮಾಡಿ, ಒಂದು ಪ್ರದಕ್ಷಿಣೆ ಬಂದು ಸಿಂಗಾರ ಚೂರುಗಳನ್ನು ನೆರೆದವರಿಗೆ ನೀಡಿ ದೇವರಲ್ಲಿ ಪುನ: ಪ್ರಾರ್ಥಿಸುತ್ತಾರೆ.

ಮದರಂಗಿ

ಮದರಂಗಿ ಸಂಪ್ರದಾಯ ಮೊಗವೀರ ಸಮಾಜದಲ್ಲಿ ಇತರೆ ಸಮಾಜಗಳಲ್ಲಿ ಕಂಡುಬರುವಂತೆ ಇಂದು ನಿನ್ನೆಯದಲ್ಲ. ಮದುವೆಯ ಮೊದಲ ದಿನ ಸಂಜೆ ಕತ್ತಲಾಗುತ್ತಿದ್ದಂತೆ ಮದರಂಗಿ ಇಡುವ ತಯಾರಿಯ ತರಾತುರಿ ಪ್ರಾರಂಭವಾಗುತ್ತದೆ. ಹಿಂದೆ ಸಂಪ್ರದಾಯಕ್ಕಾಗಿ ಮಾಡುತ್ತಿದ್ದ ಈ ಆಚರಣೆ ಇಂದು ಆಧುನಿಕ ಲೇಪ ತಂದಿದೆ. ಆದಿತ್ಯವಾರ ಮದುವೆಯ ದಿನವಾದರೆ ಶನಿವಾರ ಅಷ್ಟೊಂದು ಶುಭವಲ್ಲ ಎಂಬ ನಂಬಿಕೆಯಿಂದ ಶುಕ್ರವಾರವೇ ಮದರಂಗಿ ಮುಹೂರ್ತ ಮಾಡುತ್ತಾರೆ. ಹಿಂದೆ ಮದರಂಗಿ ಸೊಪ್ಪನ್ನು ಸುಣ್ಣ ಇತ್ಯಾದಿಯೊಂದಿಗೆ ಬೆರಸಿ ಅರೆದು ತಯಾರಿಸುತ್ತಿದ್ದರೆ ಇತ್ತೀಚೆಗೆ ಸಿದ್ದಪಡಿಸಿದ ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಮದರಂಗಿ ’ಕೋನ್’ಗಳನ್ನು ಉಪಯೋಗಿಸುತ್ತಾರೆ. ಸಂಜೆಯ ಹೊತ್ತಿನಲ್ಲಿ ಮದರಂಗಿ ಕಾರ್ಯಕ್ರಮದ ಮೊದಲೇ ಮನೆತನದ ಹಿರಿಯ ಪಿತೃಗಳಿಗೆ ’ಮೀಸಲಿಡುವುದು’(ಅಡ್ಡದೀಪಿನಿ) ಸಂಪ್ರದಾಯವಿದೆ. ತುಳಸಿಕಟ್ಟೆಯ ಬಳಿ ಮದುಮಗಳನ್ನು ನಿಲ್ಲಿಸಿ ಪ್ರಾರ್ಥನೆ ಸಲ್ಲಿಸುವರು. ಮಣೆ ಯಾ ಮಂಚದಲ್ಲಿ ದೀಪ ಉರಿಸಿ ಹೂ ಇಟ್ಟು ಧೂಪಾರತಿ ಮಾಡುವರು. ಒಂದು ಕೊಡಿ ಬಾಳೆ ಎಲೆಯ ಮೇಲೆ ’ಮದರಂಗಿ ತಟ್ಟೆ’ ಅಥವಾ ’ಮದರಂಗಿ ಕೋನ್’ ಇಟ್ಟು ದೇವರಿಗೆ ಪ್ರಾರ್ಥನೆ ಮಾಡಲಾಗುತ್ತದೆ. ನಂತರ ಚಾಪೆಯನ್ನು ತುಳಸಿ ಕಟ್ಟೆಯ ಮುಂಭಾಗದಲ್ಲಿ ಹಾಕಿ ಮದುಮಗಳನ್ನು ಕುಳ್ಳಿರಿಸಿ ಮೊದಲು ಸಾಂಕೇತಿಕವಗಿ ವೀಳ್ಯದೆಲೆಯ ಮೇಲೆ ಸೋದರತ್ತೆ ಅಥವಾ ನಾದಿನಿ ಹಾಗೂ ನೆರೆದ ಹಿರಿ-ಕಿರಿಯರು ಮದರಂಗಿ ಇಡುತ್ತಾರೆ. ನಂತರ ವಿನ್ಯಾಸ ಭರಿತವಾದ ಮದರಂಗಿ ಇಡುವುದರ ಮೂಲಕ ಅಲಂಕಾರಿಕ ಮದರಂಗಿ ಇಡಲಾಗುತ್ತದೆ. ಮದುಮಗನಿಗೆ ಭಾವನೆಂಟ ಮೊದಲು ಮದರಂಗಿ ಇಡುವುದು ಬಿಟ್ಟು ಉಳಿದೆಲ್ಲವೂ ಈ ಮೇಲಿನಂತೆ ಇರುವುದು.

ಬಳೆ ತೊಡಿಸುವ ಶಾಸ್ತ್ರ

ಬಳೆ ತೊಡಿಸುವುದು ಮದುವೆ ಸಂಭ್ರದಲ್ಲಿಯ ಆಚರಣೆಯಲ್ಲಿ ಒಂದು. ಮದುವೆಗೆ ಒಂದು ವಾರ ಮುಂಚಿತವಾಗಿ ಬಂಧು-ಬಾಂಧವರಿಗೆ, ಮುತ್ತೈದೆಯರಿಗೆ ಬಳೆ ತೊಡಿಸುವುದು ರೂಢಿಯಲ್ಲಿರುವ ಪ್ರಮುಖ ಪದ್ದತಿಯಾಗಿತ್ತು. ಬಳೆಗಾರನಿಗೆ ಕರೆ ಕಳಿಸಿದ ದಿನ ಆತ ತನ್ನ ಬಳೆ ಮೂಟೆಯೊಂದಿಗೆ ವಧವಿನ ಮನೆ ಬರುತ್ತಾನೆ. ನಡುಮನೆಯಲ್ಲಿ ಚಾಪೆ ಹಾಕಿ ಬಳೆಗಾರನನ್ನು ಕುಳ್ಳಿರಿಸಿ, ಆತನ ಬಳೆಗಳಿಗೆ ಅರಸಿನ-ಕುಂಕುಮ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಮೊದಲು ವಧುವಿಗೆ ಬಳೆ ತೊಡಿಸುತ್ತಾರೆ. ಹಸಿರು, ಪಚ್ಚೆ,ಹಳದಿ, ಕುಂಕುಮ ಕೇಸರಿ ಬಳೆಗಳನ್ನು ತೊಡಿಸುತ್ತಾರೆ. ಬಳೆಗಳು 13, 15 ಹೀಗೆ ಬೆಸ ಸಂಖ್ಯೆಯಲ್ಲಿ ಬಳೆಗಳನ್ನು ತೊಡಿಸುತ್ತಾರೆ.

ಧಾರೆ ಎರೆಯುವುದು

ಮೊಗವೀರ ಸಮಾಜದಲ್ಲಿ ಮುದುವೆಯು ಧಾರ್ಮಿಕ ಪಾವಿತ್ರತೆಯಿಂದ ಸಂಪ್ರದಾಯಬದ್ದವಾದ ವಿಧಿ ವಿಧಾನಗಳ ಮೂಲಕ ವಿವಿಧ ಹಂತದ ಕಾರ್ಯಕ್ರಮದೊಂದಿಗೆ ನಡೆಯುತ್ತದೆ. ಇದರಲ್ಲಿ ಬಹುಮುಖ್ಯವಾಗಿರುವುದೇ ವಧುವನ್ನು ದಿಬ್ಬಣದ ಜೊತೆ ಕರೆ ತಂದು ಧಾರೆ ಎರೆದು ಕೊಡುವುದು. ಚೆನ್ನಾಗಿ ಅಲಂಕರಿಸಿದ ಮದುಮಗಳನ್ನು ವಾದ್ಯಘೋಷ, ಗರ್ನಾಲಿನ ಸದ್ದಿನೊಂದಿಗೆ ವರನ ಗೃಹದ ಚಪ್ಪರದ ಮುಂಭಾಕ್ಕೆ ಬಂದಾಗ ಇಡೀ ಪರಿಸರವೇ ಸಡಗರ-ಸಂಭ್ರಮದಲ್ಲಿ ನಲಿದಾಡುವುದು. ಮದುವೆ ಸಂಪ್ರದಾಯದ ಕಾರ್ಯಾಚರಣೆ ಗುರಿಕಾರರ ನೇತೃತ್ವದಲ್ಲಿ ಚಾಲನೆ ಪಡೆಯುವುದು.

ಮಲ್ಲಿಗೆ ಹೂ, ಗಂಧ, ಅರಶಿನ, ಕುಂಕುಮ, ಅಕ್ಷತೆಯೊಂದಿಗೆ ಮದುವೆ ಚಪ್ಪರದ ಬಳಿ ಈಗಾಗಲೇ ಸ್ವಾಗತ ಕೋರಿ ನಿಂತ ವರನ ಕಡೆಯ ಮುತ್ತೈದೆಯರು ಪನ್ನೀರು ಸಿಂಪಡಿಸಿ ವಧುವಿನ ಹಣೆಗೆ ಕುಂಕುಮ-ಅರಶಿನಹಚ್ಚಿ, ತಲೆಗೆ ಮಲ್ಲಿಗೆ ಹೂ ಮುಡಿಸಿ ದಿಬ್ಬಣವನ್ನು ಒಳಗೆ ಬರಮಾಡಿಕೊಳ್ಳುತ್ತಾರೆ. ಒಂದು ಹರಿವಾಣದಲ್ಲಿ ಧಾರೆ ಸೀರೆ, ರವಿಕೆ, ಹೂ, ಕುಂಕುಮ ಇತ್ಯಾದಿ ಮಂಗಲ ವಸ್ತುಗಳನ್ನು ಹಿಡಿದು ಮರನ ಕಡೆಯ ಐದು ಮಂದಿ ಮುತ್ತೈದೆಯರು ಹಾಗೂ ವಧುವಿನ ಕಡೆಯ ಐದು ಮಂದಿ ಸುಮಂಗಲೆಯರು ಮೂಡು ದಿಕ್ಕಿಗೆ ಮುಖ ಮಾಡಿ ನಿಂತ ಮದುಮಗಳ ಆಚೆ-ಈಚೆ ಅಭಿಮುಖವಾಗಿ ಎರಡು ಕಡೆಯವರು ನಿಂತು ಮೂರು ಬಾರಿ ಶಿರದ ಮೇಲಿನಿಂದ ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಹಸ್ತಾಂತರ ಮಾಡಿಕೊಂಡು ನಂತರ ಮದುಮಗಳ ಕೈಗೆ ಮಂಗಲ ವಸ್ತುವಿನ ಹರಿವಾಣವನ್ನು ನೀಡುವರು. ಅದನ್ನು ಪಡೆದ ಮದುಮಗಳು ಪಕ್ಕದವರಲ್ಲಿ ನೀಡಿ ಅಲ್ಲಿರುವ ಮುತ್ತೈದೆಯರಿಗೆ ನಮಸ್ಕರಿಸಿ, ನವ ದಾಂಪತ್ಯ ಬದುಕಿ ಆಶೀರ್ವಾದ ಪಡೆಯುತ್ತಾಳೆ.

ನಂತರ ನಡೆಯುವುದೇ ಧಾರೆ ಎರೆಯುವ ಕಾರ್ಯಕ್ರಮ. ವಧುವಿನ ತಂದೆ ತಾಯಿ ದಾರೆ ಎರೆದು ಕೊಡುವ ಕನ್ಯಾದಾನ ಬಹಳ ಭಾವನಾತ್ಮಕವಾಗಿ ಕೂಡಿರುತ್ತದೆ. ಹುಡುಗಿಯ ತಂದೆ-ತಾಯಿ ಇಲ್ಲವಾದಲ್ಲಿ ಸೋದರ ಮಾವ-ಸೋದರ ಅತ್ತೆ ಅಥವಾ ಅಕ್ಕ-ಭಾವ ಅಥವಾ ಚಿಕ್ಕಪ್ಪ-ಚಿಕ್ಕಮ್ಮ ಕನ್ಯದಾನ ಮಾಡುತ್ತಾರೆ. ಈ ಕಾರ್ಯಕ್ರಮವನ್ನು ಗುರಿಕಾರರು ಸಂಪ್ರದಾಯಬದ್ದವಾಗಿ ನಿರ್ವಹಿಸುತ್ತಾರೆ.

ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಗುರಿಕಾರರ ಮತ್ತು ಸಭಾಸದರ ಸಾಂಪ್ರದಾಯಿಕ ಮಾತುಗಳು ಹೀಗಿರುತ್ತದೆ-
ಗುರಿಕಾರರು -ಸಭೆಯ ಸಮಸ್ತರ ಉದ್ದೇಶಿಸಿ ವಧು-ವರರ ಕೈಗಳನ್ನು ಜೋಡಿಸುತ್ತೇವೆಎಂದು ಹೇಳುತ್ತಾರೆ.
ಸಭಾಸದರು- ಒಳ್ಳೆಯದು ಎಂದು ಹೇಳುತ್ತಾರೆ.
ಆನಂತರ ಗುರಿಕಾರರು ವರನ ಕೈಯ ಮೇಲೆ ವಧುವಿನ ಕೈಯನ್ನು ಇರಿಸಿ-
ಗುರಿಕಾರರು -ಧಾರೆಯಾಗಿ ವೀಳ್ಯ ಇಡುತ್ತೇವೆ ಎಂದು ಹೇಳುತ್ತಾರೆ.
ಸಭಾಸದರು -ಒಳ್ಳೆಯದು ಎನ್ನುತ್ತಾರೆ
ಗುರಿಕಾರರು - ಸಿಂಗಾರ ಹೂ ಧಾರೆಯೆರೆಯುತ್ತೇವೆ ಎಂದು ಹೇಳುತ್ತಾರೆ.
ಸಭಾಸದರು -ಒಳ್ಳೆಯದು ಎನ್ನುತ್ತಾರೆ
ಗುರಿಕಾರರು -ನೆರೆದ ಸಾವಿರಾಳು, ಸಾವಿರ ಬಳಿ, ನೆಂಟರಿಷ್ಟರು ಎಲ್ಲರೂ ಕೇಳಬೇಕು -ಸೀತ’ ಎಂಬ ಹೆಣ್ಣನ್ನು ರಾಮ ಎಂಬ ಗಂಡಿಗೆ ಧಾರೆ ಎರೆದು ಕೊಡುತ್ತೇವೆ ಎಂದು ಗಟ್ಟಿಯಾಗಿ ಹೇಳುವರು
ಸಭಾದಸರು -ಒಳ್ಳೆಯದು, ಒಳ್ಳೆಯದು ಎಂದ ಒಕ್ಕೊರಲಿನಿಂದ ಸಮ್ಮತಿ ಸೂಚಿಸುತ್ತಾರೆ.

ವಾದ್ಯ ಮೇಳದೊಂದಿಗೆ ವಧು ವರರು ಹಿಡಿದ ವೀಳ್ಯದ ಪಟ್ಟಿಯನ್ನು ತೆಗೆದಿರಿಸಿದ ನಂತರ ಮಧುಮಗಳ ಬಲಗೈಯನ್ನು ವರನ ಬಲಗೈಯಲ್ಲಿರಿಸಿ ಹರಿವಾಣದ ಮೇಲಿಟ್ಟು ವಧುವಿನ ತಂದೆ ತಾಯಿ ಕಲಶದಿಂದ ಧಾರೆ ನೀರು ಮದುಮಕ್ಕಳ ಕೈಗಳಿಗೆ ಬೀಳುವಂತೆ ನಿಧಾನವಾಗಿ ಎರೆಯುವರು. ಮೂರು ಬಾರಿ ಹೀಗೆ ಎರೆದಾಗ ಧಾರೆಯ ನೀರಿರುವ ಹರಿವಾಣವನ್ನು ತಂದು ಫಲ ಬರುವ ಕಲ್ಪವೃಕ್ಷದ ಬುಡಕ್ಕೆ ನೀರನ್ನು ಚೆಲ್ಲಿ ಸಿಂಗಾರದ ಎಸಳನ್ನ ಭಕ್ತಿಯಿಂದ ಮುಡಿಗೆ ಮುಡಿದುಕೊಳ್ಳುವರು. [ಈತನ್ಮದ್ಯೆ ವರನು ವಧುವಿಗೆ ಮಂಗಲಸೂತ್ರ ಕಟ್ಟುವ ಕಾರ್ಯ ನಡೆಯುತ್ತದೆ].

ಸಂಪ್ರದಾಯಿಕ ಮಾತುಕತೆ : ದಿಬ್ಬಣ ಹೊರಡುವಾಗ ವಧೂ-ವರರ ಕಡೆಯವರು ಪರಸ್ಪರ ಹೇಳಿಕೊಳ್ಳುವ ಸಾಂಪ್ರದಾಯಿಕ ಮಾತುಕತೆ ತುಂಬ ಸ್ವಾರಸ್ಯವಾಗಿದೆ- ವಧುವಿನ ಕಡೆಯವರು -ನಮ್ಮ ಹುಡುಗಿ ಜವಾಬ್ದಾರಿ ಯಾರು?ಎಂದು ಕೇಳುತ್ತಾರೆ. ಆಗ ವರನ ಕಡೆಯವರು -ಈಗ ತುರ್ತು ತಂದೆ ತಾಯಿ, ಆಮೇಲೆ ಗಂಡ, ಆಮೇಲೆ ಅಣ್ಣ ತಮ್ಮ, ತಪ್ಪಿದರೆ ಊರ ಗೃಹಸ್ಥರು’ ಎನ್ನುತಾರೆ. ಪುನ: ವಧುವಿನ ಕಡೆಯವರು ’ ಹುಡುಗಿಯ ತಲೆಗೆ ಹಾಕುವ ಎಣ್ಣೆ, ಬಳೆ, ಬಟ್ಟೆಬರೆ, ಊಟ ಇದಕ್ಕೆಲ್ಲ ಯಾರು ಜವಾಬ್ದಾರರು?’ಎಂದು ಕೇಳುತ್ತಾರೆ. ಆಗ ವರನ ಕಡೆಯವರು’ಈಗ ತುರ್ತು ತಂದೆ ತಾಯಿ, ಆಮೇಲೆ ಗಂಡ, ಆಮೇಲೆ ಅಣ್ಣ ತಮ್ಮ, ತಪ್ಪಿದರೆ ಊರ ಗೃಹಸ್ಥರು’ ಎನ್ನುತಾರೆ. ಅನಂತರ ಹುಡುಗಿಯನ್ನು ಆಕೆಯ ಸೋದರ ಮಾವ ಹುಡುಗನ ತಂದೆ ತಾಯಂದಿರ ವಶ ಒಪ್ಪಿಸುತ್ತಾನೆ.ದಿಬ್ಬಣ ಮುಂದುವರಿಯುತ್ತದೆ.

ಬಯಕೆ ಅಥವಾ ಸೀಮಂತ

ಹೆಣ್ಣಿನ ಜೀವನ ಪರಿವರ್ತನೆಯ ಆಗರ, ನೋವಿನಲ್ಲೂ ನಲಿವು ಕಾಣುವ, ಭಾರದಲ್ಲೂ ಬಯಕೆಯ ಹೊಂಗನಸು ಸೂಸುವ, ಕಣ್ಣೀರಿನಂಚಿನಲ್ಲೇ ಸಂತಾನದ ಕುಡಿ ನೋಡಿ ಹಿಗ್ಗುವ ಹೆಣ್ಣು ನಿಜಕ್ಕೂ ಸೃಷ್ಟಿಯ ಅದ್ಭುತಗಳಲ್ಲಿ ಒಂದು. ಹೆಣ್ಣಿನ ಬದುಕಿನಲ್ಲಿಯ ಋತುಮತಿ, ಮದುವೆಯ ನಂತರ ಮೈಮನ ಪರಿವರ್ತನೆಯ ಪ್ರಮುಖ ಘಟ್ಟ ಗರ್ಭಧಾರಣೆ, ತಾಯ್ತನಕ್ಕೆ ಮಾನಸಿಕವಾಗಿ ಪೂರ್ವ ಸಿದ್ದತೆಗೆ ಸಜ್ಜುಗೊಳ್ಳುವ ಆಕೆಗೆ ಕ್ಷಣಕ್ಷಣದಲ್ಲೂ ಉದ್ಭವಿಸುವುದು ನಾನಾ ಬಯಕೆ. ಇದಕ್ಕೆ ತಕ್ಕಂತೆ ಹಿರಿಯರಿಂದ ಕಣ್ಣೋಟದ ಕಾವಲಿನ ಜೊತೆ ಬಯಕೆಗೆಳ ಪೂರೈಕೆ ಹಾಗೂ ಸುಖ ತಾಯ್ತನಕ್ಕೆ ಹಾರೈಕೆ. ಮೊದಲ ಬಾರಿ ಗರ್ಭವತಿಯಾದಾಗ ಆಕೆಯಲ್ಲಿ ಪುಟಿದೇಳುವ ಆಶೆಯನ್ನು ಈಡೇರಿಸುವ ಒಂದು ಸಾಂಪ್ರದಾಯಿಕ ಆಚರಣೆಯೇ ಬಯಕೆ ಅಥವಾ ಸೀಮಂತ.

ಹೂ ಮುಡಿಸುವ ಶಾಸ್ತ್ರ:- ಹೆಣ್ಣು ಗರ್ಭಿಣಿಯಾಗಿ 5 ತಿಂಗಳಿಗೆ ಹಿಡಿದಂತೆ ಹೂ ಮುಡಿಸುವ ಶಾಸ್ತ್ರವಿದೆ. ತವರಿನಲ್ಲಿ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕೆಲವು ತಿಂಡಿ ತಿನಿಸುಗಳನ್ನು ಗರ್ಭಿಣಿಯ ಆಕಾಂಕ್ಷೆಯಂತೆ ಮಾಡಿ, ಹೊಸ ಸೀರೆ ಉಡುಪಿ, ಬಗೆ ಬಗೆಯ ಹೂ ಮುಡಿಸಿ, ಅಲಂಕಾರ ಮಾಡುತ್ತಾರೆ. ಹೂ ಮುಡಿಸಿದ ಹುಡುಗನ ಅಕ್ಕ ತಂಗಿಯರು ಗರ್ಭಿಣಿಯ ಮುಂಭಾಗದಲ್ಲಿರಿಸಿದ ಹರಿವಾಣದ ಮೇಲೆ ಎರಡು ಕೊಡಿ ಬಾಳೆ ಎಲೆ ಇಟ್ಟು ಅವಳಿಗೆ ಇಷ್ಟವಾದ ಭಕ್ಷ್ಯಗಳನ್ನು ಬಡಿಸುತ್ತಾರೆ.

ಬಯಕೆ ಮದುವೆ : ಹೆಣ್ಣು ಗರ್ಭಿಣಿಯಾಗಿ 7 ತಿಂಗಳು ಹಿಡಿದೊಡನೆ ಒಳ್ಳೆಯ ದಿನ ನೋಡಿ ಬಯಕೆ ಶಾಸ್ತ್ರ. ಮೊದಲಿಗೆ ಹೆಣ್ಣಿನ ತವರು ಮನೆಯಲ್ಲಿ ಜರುಗುತ್ತದೆ. ಆ ದಿನ ಹೆಣ್ಣನ್ನು ಪತಿಯ ಮನೆಯವರು ಬಂದು ಕರೆದುಕೊಂಡು ಹೋಗುತ್ತಾರೆ. ನಂತರ ಪತಿಯ ಮನೆಯಲ್ಲಿ ಈ ಶಾಸ್ತ್ರ ಜರುಗುತ್ತದೆ. ಬಯಕೆಗೆ ಬೇಕಾದ ತಿಂಡಿ ತಿನಿಸು ತಯಾರಿಸಲು ಹಳ್ಳಿಯ ನುರಿತ ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಬೇರೆ ಕಡೆಯಿಂದ ತಯಾರಿಸಿ ತರುತ್ತಿದ್ದಾರೆ. ಸಾಮಾನ್ಯವಗಿ ಬಯಕೆಗೆ 9 ಅಥವಾ 11 ಬಗೆಯ ಬಗೆಯ ಭಕ್ಷ್ಯ ಭೋಜ್ಯಗಳನ್ನು ತಯಾರಿಸುತ್ತಾರೆ. ಇವುಗಳು - ಅತ್ತರಸ, ಸೆಕಿಟ್ಟು(ಸಿಕೆಡ್ಡೆ), ಚಕ್ಕುಲಿ, ಅರಳುಂಡೆ, ಜಿಲೆಬಿ, ಹೇರಿಟ್ಟು, ಅಪ್ಪದಹಿಟ್ಟು, ಬಾಳೆಹಣ್ಣು, ಬೆಲ್ಲ, ಹಸುವಿನ ತುಪ್ಪ, ಬೂಂದಿ ಲಾಡು ಅಲ್ಲದೆ ಬೇಯಿಸಿದ ಕೋಳಿಮೊಟ್ಟೆ, ನುಗ್ಗೆ ಅಥವಾ ಬಸಳೆ ಸೊಪ್ಪು ಪಲ್ಯ ಇವುಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಈ ಎಲ್ಲಾ ಭಕ್ಷ್ಯಗಳನ್ನು ದೊಡ್ಡ ಹರಿವಾಣದಲ್ಲಿ ಬಡಿಸಿದಾಗ ಐದು ಜನ ಮುತ್ತೈದೆಯರು ಆರತಿ ಎತ್ತಿ ಶೋಭಾನೆ ಹಾಡಿ, ತಿಲಕ ಇಡುತ್ತಾರೆ. ಗರ್ಭಿಣಿಯು ಒಂದೆರಡು ಭಕ್ಷ್ಯೆಗಳನ್ನು ಅಲ್ಲಿರುವ ಚಿಕ್ಕ ಮಕ್ಕಳಿಗೆ ಹಂಚಿ ತಾನೂ ತಿನ್ನುವಳು. ನಂತರ ಅತ್ತೆ ಮನೆ, ತವರು ಮನೆ, ನೆಂಟರಿಷ್ಟರು, ಆಮಂತ್ರಿಕರು ಉಡುಗೊರೆ ನೀಡಿ, ಆಶೀರ್ವಾದ ಮಾಡುತ್ತಾರೆ. ಎಲ್ಲರ ಊಟ ಮುಗಿದ ಬಳಿಕೆ ದೈವ/ದೇವರ ಪ್ರಾರ್ಥನೆಯೊಂದಿಗೆ ತವರು ಮನೆಗೆ ಗರ್ಭಿಣಿಯನ್ನು ಬೀಳ್ಕೊಡುತ್ತಾರೆ. ಅಂತೆಯೇ ಬಯಕೆ ತಿಂಡಿ ತಿನಿಸುಗಳನ್ನು ಬಟ್ಟೆಯಲ್ಲಿ ಕಟ್ಟಿ, ಗರ್ಭಿಣಿಯ ಸಹೋದರ ಸಂಪ್ರದಾಯದಂತೆ ಹೊತ್ತು ಮುನ್ನೆಡೆದಾಗ, ಅರಳಿದ ಮೈಸಿರಿಯ ಮಡಿಲಲ್ಲಿ ಮಮತೆಯ ಕುಡಿ ಹೊತ್ತು ಹೊರಡುತ್ತಾಳೆ ಕಡಲಮ್ಮನ ಮಗಳು .. . . .

ಅಂತ್ಯಕ್ರಿಯೆ

ಮೃತ ದೇಹವನ್ನು ಮನೆಯ ಚಾವಡಿಯ ಬರೀ ನೆಲದಲ್ಲಿ ಮಲಗಿಸಿ, ತೆಂಗಿನ ಕಾಯಿಯನ್ನು ಒಡೆದು ಒಂದು ತಳಭಾಗದಲ್ಲಿ, ಇನ್ನೊಂದು ಕಾಲು ಭಾಗದಲ್ಲಿ ಇಟ್ಟು ಬತ್ತಿ ಹಾಗೂ ಎಣ್ಣೆ ಹಾಕಿ ದೀಪ ಹಚ್ಚುವ ಸಂಪ್ರದಾಯ ಸರ್ವೇ ಸಾಮಾನ್ಯವಾಗಿದೆ. ಹಾಗೆಯೇ ತಲೆ ಮತ್ತು ಕಾಲುಗಳ ಹತ್ತಿರ ಅಕ್ಕಿ ಮತ್ತು ಒಂದು ಸೇರು ಭತ್ತ ಇಡುವ ಸಂಪ್ರದಾಯವೂ ಇದೆ.

ಶವಸ್ನಾನ

ಹಸಿ ತೆಂಗಿನಗರಿಯನ್ನು ತೆಂಕು ಮುಖ (ದಕ್ಷಿಣ ದಿಕ್ಕು) ಮಾಡಿ ಅಂಗಳದಲ್ಲಿಟ್ಟು, ಅದರ ಮೇಲೆ ಶವವನ್ನು ಮಲಗಿಸಿ, ಅರಸಿನ ಹುಡಿ ಮತ್ತು ಸೀಗೆ ಹುಡಿ ಹಚ್ಚಿ ಬಿಸಿ ನೀರಲ್ಲಿ ಮೀಯಿಸುತ್ತಾರೆ. ಸ್ನಾನ ನಂತರ ಪುನ: ಶವವನ್ನು ಒಳಗೆ ಕೊಂಡುಹೋಗಿ, ಹೊಸ ಬಟ್ಟೆ ಹಾಕುತ್ತಾರೆ. ಬಿದಿರು ಇರುವ ಕಡೆ ಬಿದಿರಿನ ಚಟ್ಟದಲ್ಲಿ, ಬಿದಿರು ಇಲ್ಲದಿದ್ದರೆ ತೆಂಗಿನ ಗರಿಯ ದಂಡಿನಿಂದ ಮಾಡಿದ ಚಟ್ಟದಲ್ಲಿ ಶವವನ್ನು ಮಲಗಿಸಿ ದಹನಕ್ಕೆ ಕೊಂಡು ಹೋಗುತ್ತಾರೆ. ದಹನಕ್ಕಿಂತ ಮೊದಲು ಒಂದು ತೆಂಗಿನ ಕಾಯಿಯನ್ನು ಕಾಷ್ಟಕ್ಕೆ ಹಾಕಿ ಕಾಷ್ಟ ಶುದ್ದ ಮಾಡುವ ಕ್ರಮವಿದೆ. ದಹನವಾದ 5, 7 ಅಥವಾ 9ನೇ ದಿನ ಅಸ್ಥಿ ಸಂಚಯನ (ಚಿತೆಯಲ್ಲಿ ಸುಟ್ಟು ಉಳಿದ ಎಲುಬು ತುಂಡುಗಳ ಸಂಗ್ರಹ) ಮಾಡುತ್ತಾರೆ. ಕೆಲವು ಕಡೆ 14ನೆ ದಿನವೂ ಈ ಕಾರ್ಯಕ್ರಮವನ್ನು ಜರಗಿಸುತ್ತಾರೆ. ತುಳುವಿನಲ್ಲಿ ಈ ಕಾರ್ಯಕ್ರಮಕ್ಕೆ ಕೊಳ್ಳಿ ’ಮಗ್ರ್ಪುನ’(ಕೊಳ್ಳಿ ಮಗಚುವುದು) ಎಂದು ಹೆಸರು.

ಚಿತೆಯಲ್ಲಿ ಉಳಿದಿರುವ ಎಲುಬುಗಳನ್ನು ಸಂಗ್ರಹಿಸಿ, ಬಳಿಕ ಅಲ್ಲಿರುವ ಮಣ್ಣನ್ನು ಗುಡ್ಡೆ (ರಾಶಿ) ಮಾಡಿ, ಅದರ ಮೇಲೆ ಒಂದು ಮಾವಿನೆಲೆಯ ಗೊಂಚಲು, ಸೀಯಾಳ, ದೋಸೆ ಇತ್ಯಾದಿಗಳನ್ನು ಇಟ್ಟು ಬರುತ್ತಾರೆ. ಮಸಣದಿಂದ ತಂದ ಎಲುಬು ತುಂಡುಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡುತ್ತಾರೆ. ಹತ್ತರಂದು ಶುದ್ಧಿ ಕಾರ್ಯ, ಹನ್ನೊಂದು ಅಥವಾ ಹದಿಮೂರರಂದು ಬ್ರಾಹ್ಮಣ ಪುರೋಹಿತರ ಮೂಲಕ ಕಡಲತೀರದಲ್ಲಿ ತಿಲಹೋಮ, ಪಿಂಡಪ್ರದಾನಾದಿ ಕ್ರಿಯೆಗಳನ್ನು ನಡೆಸುತ್ತಾರೆ.

ಒಳಗೆ ಕರೆಯುವುದು (ಉಲಾಯಿ ಲೆಪ್ಪುನು)

ಹದಿಮೂರು ದಿನ ಈ ಕ್ರಿಯೆ ಜರುಗುತ್ತದೆ. ಈ ದಿನ ಕಡುಬು ಇತ್ಯಾದಿ ತಯಾರಿಸಿ, ಮನೆಯೊಳಗೆ ಒಂದು ಕೋಣೆಯಲ್ಲಿ ಎಲ್ಲವನ್ನೂ ಬಳಸಿ, ಸತ್ತವರನ್ನು ಹೊಗಳಿ, ಗುರಿಕಾರರು ಉಲಾಯಿ ಬಲಸ್ ದ್ಂಡ್-ಕೈಕೊನೊಡು (ಒಳಗೆ ಬಳಸಿದ್ದೇವೆ ಸ್ವೀಕರಿಸಬೇಕು) ಎಂದು ಪ್ರಾರ್ಥಿಸುತ್ತಾರೆ. ಮಡಿದ ವ್ಯಕ್ತಿಯ ತಂಗಿ ಅಥವಾ ಮಗಳು ಒಂದು ಗಿಂಡಿಯಲ್ಲಿ ನೀರು ತುಂಬಿಸಿ, ಕೈಯಲ್ಲಿ ಹಿಡಕ್ಕೊಂಡು ಬಾಗಿಲ ಹತ್ತಿರ ನಿಂತು ’ಉಲಾಯಿ ಬಲೆ’ (ಒಳಗೆ ಬನ್ನಿ) ಎಂದು ಕರೆಯುತ್ತಾರೆ. ಆನಂತರ ಸ್ವಲ್ಪ ಹೊತ್ತು ಆ ಕೋಣೆಯ ಬಾಗಿಲನ್ನು ಹಾಕಿಡುತ್ತಾರೆ. ಬಳಿಕ ಬಾಗಿಲು ತೆರೆದು ನೀರು ಪ್ರೋಕ್ಷಿಸಿ, ಆ ಕಡುಬು ಇತ್ಯಾದಿಗಳನ್ನು ಪ್ರಸಾದವೆಂದು ಭಾವಿಸಿ, ಮಡಿದವನ ಮಕ್ಕಳು ಹಾಗೂ ಕುಟುಂಬಸ್ಥರು ಊಟ ಮಾಡುತ್ತಾರೆ.

ತುಳುವರು ಊರ ಹಬ್ಬದ ದಿವಸ, ಮದುವೆಯ ಮುಂಚಿನ ದಿನ ಹಾಗೂ ಚೌತಿ, ಅಷ್ಟಮಿ ಮುಂತಾದ ವಿಶೇಷ ದಿನಗಳಲ್ಲಿ ಹಬ್ಬದ ಅಡುಗೆ ಮಾಡಿದಾಗಲೆಲ್ಲಾ ಸತ್ತವರನ್ನು ಜ್ಞಾಪಿಸಿಕೊಂಡು ಇದೇ ರೀತಿ ಮೀಸಲು ಇಡುವ (ಅಗೆಲ್ ಬಲಸುನೆ) ಸಂಪ್ರದಾಯವಿದೆ.