Back to homepage

ಶ್ರೀ ಗಣೇಶ್ ಕಾಂಚನ್

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ದಿನಾಂಕ: 10-08-1974 ರಂದು ಶ್ರೀ ಮಂಜು ನಾಯ್ಕ್ ಮತ್ತು ಶ್ರೀಮತಿ ಲಕ್ಷ್ಮೀ ಇವರ ದ್ವಿತೀಯ ಪುತ್ರನಾಗಿ ಜನಿಸಿದ ಶ್ರೀ ಗಣೇಶ್ ಕಾಂಚನ್ ರವರು ವೃತ್ತಿಯಲ್ಲಿ ಶಿಕ್ಷಕರು. ತನ್ನ ಬಾಲ್ಯ ಜೀವನವನ್ನು ಶಂಕರನಾರಾಯಣ ಮತ್ತು ಬೀಜಾಡಿಯಲ್ಲಿ ಕಳೆದ ಇವರು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಾದ ಶಂಕರನಾರಾಯಣದಲ್ಲಿ ಮುಗಿಸಿದರು. ಕಡು ಬಡತನದಲ್ಲಿಯೇ ವ್ಯಾಸಾಂಗವನ್ನು ಮಾಡುತ್ತಾ ದೂರದ ಮಂಗಳೂರಿನಲ್ಲಿ ಶಿಕ್ಷಕ ತರಬೇತಿಯನ್ನು ಮುಗಿಸಿ, ತನ್ನ ಆಸಕ್ತಿಯ ಶಿಕ್ಷಣ ವೃತ್ತಿಗೆ 1998 ರಂದು ಸೇರ್ಪಡೆಗೊಂಡರು. ನಂತರ ಉನ್ನತ ವ್ಯಾಸಾಂಗದ ಕನಸಿನೊಂದಿಗೆ ದೂರಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಪದವಿ ಶಿಕ್ಷಣ ಪಡೆದ ಇವರು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ( ಇಗ್‌ನೋ), ನವದೆಹಲಿ ಇಲ್ಲಿ ಬಿ.ಎಡ್. ಪದವಿ ಪಡೆದರು. ನಂತರ 2008 ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಪಡೆದು ಪ್ರಸ್ತುತ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. " ಸಾಧಿಸಿರುವುದು ಸಾಸಿವೆಯಷ್ಟು, ಸಾಧಿಸಬೇಕಾಗಿರುವುದು ಸಾಗರದಷ್ಟು" ಎಂಬ ನಿಲುವಿನೊಂದಿಗೆ ತನ್ನ ಉನ್ನತ ವ್ಯಾಸಾಂಗವನ್ನು ಮುಂದುವರೆಸಿದರು. ಮಾನಸ ಗಂಗೋತ್ರಿ, ಮೈಸೂರು ಇಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲೀಷ್‌ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.

ಪಠ್ಯದೊಂದಿಗೆ ಸಹ - ಪಠ್ಯ ವಿಷಯದಲ್ಲಿಯೂ ಕ್ರಿಯಾಶೀಲರಾಗಿರುವ ಇವರು, ಭಾರತ್ ಸ್ಕೌಟ್ಸ್ ನಲ್ಲಿ ಹಿಮಾಲಯನ್ ವ್ರಕ್ಷಮಣಿ ತರಬೇತಿಯನ್ನು ಪಡೆದರು. ಹಾಗೂ ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ದಿನಾಂಕ: 01-02-2004 ರಂದು ಸುಜಾತ ಳೊಂದಿಗೆ ದಾಂಪತ್ಯ ಜೀವನ ಆರಂಭಿಸಿದ ಇವರು ಇಬ್ಬರು ಪುತ್ರಿಯರಾದ ಕುಮಾರಿ ಪ್ರಣವ್ಯ ಹಾಗೂ ಕುಮಾರಿ ಪ್ರಾರ್ಥನಾ ಳೊಂದಿಗೆ ಪ್ರಸ್ತುತ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿಯಲ್ಲಿ ನೆಲೆಸಿದ್ದಾರೆ.

ಮೊಗವೀರ ಸಮಾಜದ ಕುಲರತ್ನ ಸಮಾಜಮುಖಿ ಚಿಂತನೆಯ ಹರಿಕಾರ ನಾಡೋಜ ಡಾ: ಜಿ.ಶಂಕರ್ ರವರ ಮತ್ತು ಸಮಾಜದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಆರಂಭವಾದ " ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ" ಇದರ ಅತ್ಯಂತ ಗ್ರಾಮೀಣ ಘಟಕವಾದ " ಹಾಲಾಡಿ-ಶಂಕರನಾರಾಯಣ" ಘಟಕದಲ್ಲಿ ಗುರುತಿಸಿಕೊಂಡು, ಘಟಕದ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2012-13ನೇ ಸಾಲಿನಲ್ಲಿ ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 2014-15 ನೇ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜಿ. ಶಂಕರ್ ರವರ ಸಮಾಜ ಸೇವಾ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ಇವರ ಸೇವೆಯ ಫಲಶ್ರುತಿಯೆಂಬಂತೆ " ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ " ಇದರ 2016-2017 ರ ಸಾಲಿನ ಅಧ್ಯಕ್ಷರಾಗಿ ದಿನಾಂಕ: 30-01-2016 ರಂದು ಪದ ಸ್ವೀಕಾರ ಹೊಂದಿದ್ದಾರೆ.